Leadership for India
ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಐದೇ ವರ್ಷದಲ್ಲಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತವು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ನಾಯಕತ್ವ ವಹಿಸಿದ್ದು, ಕಾಲು ಕೆರೆದುಕೊಂಡು ಭಾರತದ ತಂಟೆಗೆ ಬಂದ್ರೆ ಅಂತವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಉಡುಪಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿಗೆ ಭೇಟಿ ನೀಡಿ, ಮಣಿಪಾಲದ ಮಾಹೆ ವಿ.ವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾಹೆ ವಿಶ್ವ ವಿದ್ಯಾನಿಲಯದ ಮೂವತ್ತನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದ್ದು, ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ.
2047ಕ್ಕೆ ಭಾರತ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲಲಿದ್ದು, ಇಡೀ ಪ್ರಪಂಚವೇ ಈಗ ಭಾರತದ ಮಾತು ಕೇಳುವ ಕಾಲ ಬಂದಿದೆ. ನಾವಾಗಿ ಕಾಲು ಕೆರೆದುಕೊಂಡು ಯಾರ ಜೊತೆಯೂ ಗಲಾಟೆ ಮಾಡಲ್ಲ. ಆದ್ರೆ ಭಾರತದ ತಂಟೆಗೆ ಬಂದರೆ ಮಾತ್ರ ಅದಕ್ಕೆ ಸರಿಯಾದ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಂಐಟಿ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಆರ್ಕಿಟೆಕ್ಚರ್ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ. ಮೂರು ದಿನಗಳಲ್ಲಿ 5,062 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವಾಗಲಿದ್ದು, 208 ಜನ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರಧಾನವಾಗಲಿದೆ. ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿದ ರಾಜನಾಥ್ ಸಿಂಗ್, ವಿದ್ಯಾರ್ಥಿಗಳಿಗೆ ಕೆಲವು ಕಿವಿಮಾತುಗಳನ್ನು ಹೇಳಿ ಗಮನ ಸೆಳೆದರು.








