2022ರ ವಿಶ್ವಕಪ್ ನಂತರ ಮಿಥಾಲಿ ರಾಜ್ ಕ್ರಿಕೆಟ್ ಬದುಕಿಗೆ ವಿದಾಯ..!
ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸುಳಿವನ್ನು ನೀಡಿದ್ದಾರೆ.
2022ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಂತರ ವಿದಾಯ ಹೇಳುವುದಾಗಿ ಮಿಥಾಲಿ ರಾಜ್ ಹೇಳಿದ್ದಾರೆ.
ಈಗಾಗಲೇ ಮಿಥಾಲಿ ರಾಜ್ 21 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ. 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಿಥಾಲಿ ರಾಜ್, ಒಂದು ದ್ವಿಶತಕ ಸೇರಿ 663 ರನ್ ಕಲೆ ಹಾಕಿದ್ದಾರೆ. ಇನ್ನು 214 ಏಕದಿನ ಪಂದ್ಯಗಳನ್ನು ಆಡಿರುವ ಮಿಥಾಲಿ, ಏಳು ಶತಕ ಹಾಗೂ 55 ಅರ್ಧಶತಕಗಳ ಸಹಾಯದಿಂದ 7098 ರನ್ ಕಲೆ ಹಾಕಿದ್ದಾರೆ. ಇನ್ನು 89 ಟಿ-ಟ್ವೆಂಟಿ ಪಂದ್ಯಗಳಲ್ಲಿ ಮಿಥಾಲಿ ರಾಜ್, 17 ಅರ್ಧಶತಕಗಳ ನೆರವಿನಿಂದ 2364 ರನ್ ಪೇರಿಸಿದ್ದಾರೆ. ಒಟ್ಟು ಮೂರು ಮಾದರಿಯ ಕ್ರಿಕೆಟ್ ನಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್ ದಾಖಲಿಸಿದ್ದಾರೆ.
ಇದೊಂದು 21 ವರ್ಷಗಳ ಸುದೀರ್ಘ ಪಯಣ. ನನಗೂ ಗೊತ್ತು. 2022 ವಿಶ್ವಕಪ್ ಮಹತ್ವದ್ದು ಎಂಬುದು. ಫಿಟ್ ನೆಸ್ ನತ್ತ ನಾನು ಹೆಚ್ಚು ಆದ್ಯತೆ ನೀಡಬೇಕು. ನಾನೇನು ಯುವತಿಯಲ್ಲ. ನನಗೂ ವಯಸ್ಸಾಗಿದೆ. ಫಿಟ್ ನೆಸ್ ನ ಮಹತ್ವ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಮಿಥಾಲಿ ರಾಜ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ತವರಿನಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಆಡಲಿದೆ.