ಪ್ಯಾರಿಸ್: ಭಾರತೀಯ ಕುಸ್ತಿ ಪಟು ವಿನೇಶ್ ಫೋಗಟ್ (Vinesh Phogat) ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics 2024) ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉಕ್ರೇನ್ ನ ಆಟಗಾರ್ತಿ ಹಾಗೂ ಮೂರು ಬಾರಿ CWG ಚಿನ್ನದ ಪದಕ ಗೆದ್ದಿದ್ದ ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸುವ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ವಿನೇಶ್ ಅವರ ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಇದಾಗಿದೆ. ಈ ಮೂಲಕ ಈಗ ವಿನೇಶ್ ಫೈನಲ್ ಸ್ಥಾನಕ್ಕಾಗಿ ಕ್ಯೂಬಾದ ಯೂಸ್ನಿಲಿಸ್ ಗುಜ್ಮನ್ ಎದುರು ಸೆಣಸಾಟ ನಡೆಸಬೇಕಿದೆ. ಗುಜ್ಮನ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ 2023 ರಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ವಾರ್ಟರ್ ಫೈನಲ್ ಗೂ ಮುನ್ನ ವಿನೇಶ್ ಕಳೆದ ಬಾರಿಯ ಚಿನ್ನದ ಪದಕ ವಿಜೇತೆಯನ್ನೇ ಸೋಲಿಸಿದ್ದರು. ವಿನೇಶ್, ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಗೆ ಅರ್ಹತೆ ಪಡೆದಿದ್ದರು. ಜಪಾನಿನ ಕುಸ್ತಿಪಟು ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಟೋಕಿಯೊ ಗೇಮ್ಸ್ ನಲ್ಲಿ ಒಂದೇ ಒಂದು ಅಂಕವನ್ನು ಯಾರಿಗೂ ಬಿಟ್ಟು ಕೊಡದೆ ಚಿನ್ನಕ್ಕೆ ಮುತ್ತಿಕ್ಕಿದ್ದರು. ಈಗ ವಿನೇಶ್ ಅವರನ್ನೇ ಸೋಲಿಸಿ ಮುನ್ನುಗ್ಗುತ್ತಿದ್ದಾರೆ. ಇಡೀ ಭಾರತವೇ ಈ ಸಾಧನೆಗೆ ಹೆಮ್ಮೆ ಪಡುತ್ತಿದೆ.