ನಟಿ ರಮ್ಯಾ ಅವರು ನಟಿಸಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel hudugaru bekagiddare) ಸಿನಿಮಾದ ವಿರುದ್ಧ ಸ್ವತಃ ತಡೆಯಾಜ್ಞೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ನಿನ್ನೆ (ಜುಲೈ 19) ನಡೆದಿದ್ದು, ಇಂದು ಕೂಡ ವಿಚಾರಣೆ ನಡೆಯಲಿದೆ. ಸಿನಿಮಾದ ವಿರುದ್ಧ ರಮ್ಯಾ ಅವರು ತಡೆಯಾಜ್ಞೆ ತರಲು ಮುಂದಾಗಿರುವುದರ ಬಗ್ಗೆ ನಿರ್ಮಾಪಕರಾದ ವರುಣ್ ಮತ್ತು ನಿತಿನ್ ಮಾತನಾಡಿದ್ದಾರೆ.
ಈ ಸಿನಿಮಾದಲ್ಲಿ ತಾನು ನಟಿಸಿರುವ ವಿಡಿಯೋ ಕ್ಲಿಪ್ ಮತ್ತು ಫೋಟೊಗಳನ್ನು ತೆಗೆದು ಹಾಕಬೇಕು ಹಾಗೂ ಇದರ ಟ್ರೇಲರ್ನಲ್ಲಿರುವ ತನ್ನ ದೃಶ್ಯಗಳನ್ನೂ ಡಿಲೀಟ್ ಮಾಡಬೇಕು ಎಂದು ಅವರು ವಕೀಲರ ಮೂಲಕ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ತಮ್ಮ ದೃಶ್ಯದ ಕ್ಲಿಪ್ಪಿಂಗ್ಸ್ ತೆಗೆಯಬೇಕು ಎಂದಿರುವ ರಮ್ಯಾ, ಒಪ್ಪಂದವನ್ನು ಚಿತ್ರತಂಡ ಮುರಿದ ಕಾರಣ ತಮಗೆ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಹೇಳಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸಿರುವ ರಮ್ಯಾ, ಚಿತ್ರೀಕರಣದ ಸಮಯದಲ್ಲಿ ತಮ್ಮ ಫೋಟೋ ಮತ್ತು ವಿಡಿಯೋವನ್ನು ಪ್ರಚಾರಕ್ಕೆ ಬಳಸಬಾರದು ಎಂದು ಚಿತ್ರತಂಡಕ್ಕೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಈ ಒಪ್ಪಂದವನ್ನು ಚಿತ್ರತಂಡ ಮುರಿದಿದ್ದು, ಸಿನಿಮಾ ಸೇರಿದಂತೆ ಅದರ ಟ್ರೇಲರ್, ಪೋಸ್ಟರ್ನಲ್ಲಿ ತಮ್ಮ ಫೋಟೋ, ವಿಡಿಯೋಗಳನ್ನು ತೆಗೆಯಬೇಕು ಹಾಗೂ ತಮ್ಮ ಅನುಮತಿಯಿಲ್ಲದ ಅನಧಿಕೃತವಾಗಿ ತಮ್ಮ ದೃಶ್ಯವಿರುವ ಟ್ರೇಲರ್ ಬಿಡುಗಡೆ ಮಾಡಿದ ಕಾರಣ ಚಿತ್ರತಂಡ ತಮಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ನೊಟೀಸ್ ನಲ್ಲಿ ತಿಳಿಸಿದ್ದಾರೆ.