ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಸೌತ್ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 38 ರನ್‌ಗಳ ಅವಿಸ್ಮರಣೀಯ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಹೀಗಾಗಿ 43 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಹೀಗಾಗಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನೆದರ್ಲೆಂಡ್ಸ್ 43 ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಆದರೆ ಈ ಟಾರ್ಗೆಟ್ ಚೇಸ್ ಮಾಡಿದ ಸೌತ್ ಆಫ್ರಿಕಾ 42.5 ಓವರ್‌ಗಳಲ್ಲಿ 207 ರನ್‌ಗಳಿಸಿ ಸರ್ವಪತನ ಕಂಡಿತು.
ಡಚ್ಚರ ಬ್ಯಾಟಿಂಗ್ ವೈಫಲ್ಯ:
ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಬಂದ ವಿಕ್ರಮ್‌ಜಿತ್ ಸಿಂಗ್(2), ಮ್ಯಾಕ್ಸ್ ಓಡೌಡ್(18) ಬಹುಬೇಗನೆ ಔಟಾದರೆ. ನಂತರದಲ್ಲಿ ಬಂದ ಅಕ್ರೆಮನ್(13), ಬಾಡ್ ಡಿಲೀಡೆ(2) ಹಾಗೂ ಎಂಗಲ್‌ಬ್ರೆಕ್ಟ್(19) ತಂಡಕ್ಕೆ ಆಸರೆಯಾಗಲಿಲ್ಲ. ಇದರ ಪರಿಣಾಮ 82 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು.
ನಾಯಕನ ಭರ್ಜರಿ ಆಟ:
ಪ್ರಮುಖ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ನೆದರ್ಲೆಂಡ್ಸ್‌ಗೆ ನಾಯಕ ಸ್ಕಾಟ್ ಎಡ್ವರ್ಡ್ಸ್(78*) ಆಸರೆಯಾದರು. ಜವಾವ್ದಾರಿಯ ಆಟದಿಂದ ಸೌತ್ ಆಫ್ರಿಕಾ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ ಎಡ್ವರ್ಡ್ಸ್, 69 ಬಾಲ್‌ಗಳಲ್ಲಿ 10 ಬೌಂಡರಿ, 1 ಸಿಕ್ಸ್ ಮೂಲಕ 78* ರನ್‌ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಿಡಮನೂರು(20), ವ್ಯಾನ್ ದರ್ ಮಾರ್ವೆ(29) ಹಾಗೂ ಆರ್ಯನ್ ದತ್(23*) ಉಪಯುಕ್ತ ರನ್‌ಗಳಿಸಿದ ಪರಿಣಾಮ ನೆದರ್ಲೆಂಡ್ಸ್ 43 ಓವರ್‌ಗಳಲ್ಲಿ 245/8 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಸೌತ್ ಆಫ್ರಿಕಾ ಪರ ಎನ್‌ಗಿಡಿ, ಜಾನ್ಸನ್, ರಬಾಡ ತಲಾ 2 ವಿಕೆಟ್ ಪಡೆದರೆ. ಮಹಾರಾಜ್ ಮತ್ತು ಕಾಟ್ಜೆ ತಲಾ 1 ವಿಕೆಟ್ ಪಡೆದುಕೊಂಡರು.
ತತ್ತರಿಸಿದ ಆಫ್ರಿಕನ್ ಬ್ಯಾಟರ್ಸ್:
ನೆದರ್ಲೆಂಡ್ಸ್ ನೀಡಿದ 246 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ನೂರು ರನ್ ಗಡಿದಾಟುವ ಮುನ್ನವೇ ಬವುಮಾ(16), ಡಿಕಾಕ್(20), ದುಸೇನ್(4), ಮಾರ್ಕ್ರಂ(1) ಹಾಗೂ ಕ್ಲಾಸೆನ್(28) ವಿಕೆಟ್‌ಗಳನ್ನ ಕಳೆದುಕೊಂಡು ಆಘಾತ ಕಂಡಿತು. ಆದರೆ ಈ ಹಂತದಲ್ಲಿ ಬಂದ ಡೇವಿಡ್ ಮಿಲ್ಲರ್(48) ತಂಡದ ಜಯದ ಆಸೆಯನ್ನ ಜೀವಂತ ಇರಿಸಿದರು. ಕೆಳ ಕ್ರಮಾಂಕದಲ್ಲಿ ಕಾಟ್ಜೆ(22), ಜಾನ್ಸನ್(9), ರಬಾಡ(9) ಸಹ ತಂಡಕ್ಕೆ ಆಸರೆಯಾಗಲಿಲ್ಲ. 10ನೇ ವಿಕೆಟ್‌ಗೆ ಜೊತೆಯಾದ ಮಹಾರಾಜ್(40) ಹಾಗೂ ಎನ್‌ಗಿಡಿ(9*) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು ತಂಡಕ್ಕೆ ಗೆಲುವು ಸಿಗಲಿಲ್ಲ.
ನೆದರ್ಲೆಂಡ್ಸ್ ಉತ್ತಮ ದಾಳಿ:
ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ನೆದರ್ಲೆಂಡ್ಸ್‌ಗೆ ಬೌಲರ್‌ಗಳು ಕೈಹಿಡಿದರು. ಇನ್ನಿಂಗ್ಸ್ ಆರಂಭದಿಂದಲೇ ಸೌತ್ ಆಫ್ರಿಕಾ ಬ್ಯಾಟರ್‌ಗಳ ರನ್‌ಗಳಿಕೆಯ ಓಟಕ್ಕೆ ಬ್ರೇಕ್ ಹಾಕಿದ ಬೌಲರ್‌ಗಳು, ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನೆದರ್ಲೆಂಡ್ಸ್ ಪರ ವ್ಯಾನ್ ಬೀಕ್ 3 ವಿಕೆಟ್ ಪಡೆದು ಮಿಂಚಿದರೆ.
ಮಾರ್ವೆ, ಡಿಲೀಡೆ, ಮೆಕೆರನ್ ತಲಾ 2 ವಿಕೆಟ್ ಹಾಗೂ ಕಾಲಿನ್ ಆಕ್ರಮಾನ್ 1 ವಿಕೆಟ್ ಪಡೆದುಕೊಂಡರು.
RSA v NED, South Africa, Netherlands, World Cup, ODI Cricket