Siddaramaiah | ಸಾವರ್ಕರ್ ಗೆ ಮೊದಲ ಸಾಲಿನ ಗೌರವ.. ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ
ಬೆಂಗಳೂರು : ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಫೋಟೋ, ಹೆಸರು ಕೈಬಿಟ್ಟಿರುವುದನ್ನ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್ ಎಸ್ ಎಸ್ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ ಬಸವರಾಜ ಬೊಮ್ಮಾಯಿ ಅವರೇ? ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ?

ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ. ‘ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ’.
ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರೇ, ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ.