Superstar Krishna is more
ತೆಲುಗು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ಹಿರಿಯ ನಟ ಕೃಷ್ಣ ಅವರು ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಸೂಪರ್ ಸ್ಟಾರ್ ಕೃಷ್ಣ ಘಟ್ಟಮನೇನಿ ಅವರಿಗೆ ನಿನ್ನೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು ಮತ್ತು ಅವರು ಉಸಿರಾಟದ ತೊಂದರೆ ಜೊತೆಗೆ ಬಹು ಅಂಗಾಂಗ ವೈಫಲ್ಯ ಅನುಭವಿಸುತ್ತಿದ್ದರು.
ಕೃಷ್ಣ ಅವರ ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ. ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಆ ಕಾಲದ ಅಗ್ರಗಣ್ಯ ನಟರಲ್ಲಿ ಒಬ್ಬರು.
ನಟ ಕೃಷ್ಣ ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆಯಾಗಿದ್ದು, ಸೆಪ್ಟೆಂಬರ್ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದ್ದರು. ಕೃಷ್ಣ ಅವರ ಹಿರಿಯ ಪುತ್ರ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು.
ಪತ್ತೇದಾರಿ, ಐತಿಹಾಸಿಕ, ಪೌರಾಣಿಕ, ಪಾಶ್ಚಾತ್ಯ, ಆಕ್ಷನ್ ಹಾಗೂ ಕೌಬಾಯ್ ಚಲನಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅಭಿನಯಿಸುವ ಮೂಲಕ ಜನಮನ್ನಣೆ ಗಳಿಸಿದ್ದ ಕೃಷ್ಣ ಅವರ ತೇನೆಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು ಚಿತ್ರಗಳು ಜನಪ್ರಿಯವಾಗಿದ್ದವು.
ಆಂಧ್ರಪ್ರದೇಶದ ಜನರು ಬಾಂಡ್ ಕೃಷ್ಣ ಎಂದು ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು.