ತೆಲುಗು ಟೈಟಾನ್ಸಗೆ ಮೊದಲ ಗೆಲುವಿನ ನಿರೀಕ್ಷೆ

1 min read
ProKabaddi Saaksha Tv

ತೆಲುಗು ಟೈಟಾನ್ಸಗೆ ಮೊದಲ ಗೆಲುವಿನ ನಿರೀಕ್ಷೆ Saaksha Tv

ಪ್ರೊ ಕಬಡ್ಡಿ ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಒಂದೇ ಒಂದು ಗೆಲುವು ದಾಖಲಿಸದೆ ನಿರಾಸೆ ಅನುಭವಿಸಿರುವ ತೆಲುಗು ಟೈಟಾನ್ಸ್, ಟೂರ್ನಿಯಲ್ಲಿ ಸೊಗಸಾದ ಆಟವಾಡುತ್ತಿರುವ ಪಾಟ್ನಾ ಪೈರೇಟ್ಸ್ ವಿರುದ್ಧ ಕಾದಾಟ ನಡೆಸಲಿದೆ.

ತೆಲುಗು ಆಡಿದ ನಾಲ್ಕು ಪಂದ್ಯಗಳಲ್ಲಿ 2 ಸೋಲು, 2 ಡ್ರಾ ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್ ತಂಡ ಬುಲ್ಸ್ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿ ನಿರಾಸೆ ಅನುಭವಿಸಿತ್ತು. ಈ ಪಂದ್ಯದ ಕಹಿಯನ್ನು ಮರೆತು ಗೆಲುವಿನ ಕುದರೆ ಕಟ್ಟಿಹಾಕುವ ಕನಸು ಟೈಟಾನ್ಸ್ ತಂಡದ್ದಾಗಿದೆ. ಪಾಟ್ನಾ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ, 1 ಸೋಲು ಕಂಡಿದ್ದು 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ತೆಲುಗು ತಂಡದ ಪರ ಸಿದ್ಧಾರ್ಥ್ ದೇಸಾಯಿ ರೈಡ್ ನಲ್ಲಿ 21 ಅಂಕ ಕಲೆ ಹಾಕಿದರೆ, 14 ಬೋನಸ್ ಅಂಕ ಸೇರಿಸಿದ್ದಾರೆ. ಉಳಿದಂತೆ ಅಂಕಿತ್ ಬೆನಿವಾಲ್ 22 ರೈಡ್ ಅಂಕ ಸೇರಿಸಿದ್ದಾರೆ. ರಕ್ಷಣಾ ವಿಭಾಗದ ಆಟಗಾರ ಸಂದೀಪ್ ಕಂಡೋಲಾ 10 ಟ್ಯಾಕಲ್ ಪಾಯಿಂಟ್ ಸೇರಿಸಿದ್ದಾರೆ.

ಪಾಟ್ನಾ ಪೈರೇಟ್ಸ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ತಂಡದ ಜಯದಲ್ಲಿ ಶ್ರಮಿಸಬಲ್ಲರು. ರೈಡರ್ ಸಚಿನ್ ಒಟ್ಟು 36 ಅಂಕ ಸೇರಿಸಿದ್ದಾರೆ. ಇದರಲ್ಲಿ 26 ರೈಡ್ ಅಂಕ, 10 ಟ್ಯಾಕಲ್ ಅಂಕ ಸೇರಿವೆ. ಉಳಿದಂತೆ ಮನು ಗೋಯತ್ 38 ಅಂಕ ಬಾಚಿಕೊಂಡು ಭರವಸೆ ಮೂಡಿಸಿದ್ದಾರೆ. ರಕ್ಷಣಾ ವಿಭಾಗದ ಆಟಗಾರರು ಮನಮೋಹಕ ಪ್ರದರ್ಶನ ನೀಡುತ್ತಿದ್ದು ಗೆಲುವಿನಲ್ಲಿ ಅಬ್ಬರಿಸಬಲ್ಲರು.

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಟೈಟಾನ್ಸ್ ಹಾಗೂ ಪೈರೇಟ್ಸ್ ತಂಡಗಳು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ತೆಲುಗು ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಉಳಿದ ಪಂದ್ಯಗಳಲ್ಲಿ ಪಾಟ್ನಾ ಗೆಲುವಿನ ನಗೆ ಬೀರಿದೆ. ಸದ್ಯದ ಫಾರ್ಮ್ ನೋಡಿದರೆ, ಪಾಟ್ನಾ ಇಂದಿನ ಪಂದ್ಯದಲ್ಲಿ ಜಯ ಸಾಧಿಸಬಹುದು ಎನ್ನಲಗುತ್ತಿದೆ. ಆದರೆ ಅಂಕಿ ಅಂಶಗಳು ತೆಲುಗು ಟೈಟಾನ್ಸ್ ನತ್ತ ಮುಖ ಮಾಡಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd