ಖ್ಯಾತ ಹಿರಿಯ ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಜಯಪ್ರದಾಗೆ (Jaya Pradha) ಸಂಕಷ್ಟ ಶುರುವಾಗಿದೆ.
ಚೆನ್ನೈನ ಚಿತ್ರಮಂದಿರ ಸಿಬ್ಬಂದಿ ಪ್ರಕರಣದಲ್ಲಿ ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ವಿಧಿಸಲಾಗಿದ್ದ 6 ತಿಂಗಳ ಜೈಲು ಶಿಕ್ಷೆ ರದ್ದು ಮಾಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಮುಂದಿನ 15 ದಿನಗಳಲ್ಲಿ 20 ಲಕ್ಷ ರೂ. ಹಣ ಗ್ಯಾರಂಟಿ ಬಾಂಡ್ ಕಟ್ಟಿ ಜಾಮೀನು ಪಡೆಯುವಂತೆ ಆದೇಶ ನೀಡಿದೆ.
ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನಲ್ಲಿರುವ ಚಿತ್ರಮಂದಿರ ಹೊಂದಿದ್ದರು. ಆದರೆ, ಅದು ಇತ್ತೀಚೆಗೆ ಬಂದ್ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್ಐ ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ಹೀಗಾಗಿ ನೌಕರರು ದೂರು ದಾಖಲಿಸಿದ್ದರು, ಹೀಗಾಗಿ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಕೆಳ ಹಂತದ ನ್ಯಾಯಾಲಯದಲ್ಲಿ ಜಯಪ್ರದಾ ತಮ್ಮ ಮೇಲಿನ ಆರೋಪ ಒಪ್ಪಿಕೊಂಡಿದ್ದರಲ್ಲದೆ, ನೌಕರರಿಗೆ ಸೇರಬೇಕಾದ ಹಣವನ್ನು ಪಾವತಿ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಮನವಿ ತಳ್ಳಿ ಹಾಕಿದೆ. ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ಆರು ತಿಂಗಳ ಜೈಲು ಹಾಗೂ 5000 ಜುಲ್ಮಾನೆ ವಿಧಿಸಿ ಆಗಸ್ಟ್ 10ರಂದು ಆದೇಶ ಹೊರಡಿಸಿತ್ತು. ಈಗ ಜಯಪ್ರಧಾ ಅವರು ಜೈಲು ಶಿಕ್ಷೆ ರದ್ದಿಗೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.