ಅನಾನಸ್ ಹಣ್ಣಿನ ಗೊಜ್ಜು
ಬೇಕಾಗುವ ಪದಾರ್ಥಗಳು
ಅನಾನಸ್ – 1/2 ಹಣ್ಣು
ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ
ಮಾಡುವ ವಿಧಾನ
ಮೊದಲು ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಅನಾನಸ್ ಗೊಜ್ಜು ಸವಿಯಲು ಸಿದ್ಧವಾಗಿದೆ.