ನಾಳೆ ಶೃಂಗೇರಿ ಬಂದ್ – ಆಸ್ಪತ್ರೆ ಬೇಕೆಂದು ಪಟ್ಟು ಹಿಡಿದ ಯುವಕರು
ಕಳೆದ ಒಂದು ವರ್ಷದಿಂದ ಸುದೀರ್ಘವಾಗಿ ಸುಸಜ್ಜಿತವಾದ 100 ಬೆಡ್ ಆಸ್ಪತ್ರೆಗಾಗಿ ಹೋರಾಟ ನಡೆಸಿದ ಶೃಂಗೇರಿಯ ಯುವಕರ ಗುಂಪು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಕರೆ ನೀಡಿದೆ. 2007 ನೆಯ ಇಸವಿಯಲ್ಲಿ ಶೃಂಗೇರಿ ತಾಲೂಕು ಆರೋಗ್ಯ ಕೇಂದ್ರವನ್ನು 100 ಬೆಡ್ ಆಸ್ಪತ್ರೆಯ ನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗದ ಕೊರತೆಯ ನೆಪ ಹೇಳಿಕೊಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪೂರ್ಣ ಮಾಡಿಲ್ಲ ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಿಳಿಸಿದೆ.
ಶೃಂಗೇರಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು ಅಕ್ಕ ಪಕ್ಕದ ತಾಲೂಕಿನ ಕನಿಷ್ಟ 10 ಸಾವಿರ ಜನರಿಗೆ ಶೃಂಗೇರಿಯು ಹತ್ತಿರ ಕೇಂದ್ರವಾಗಿದೆ, ವರ್ಷಕ್ಕೆ ಸರಾಸರಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಹೀಗಿದ್ದರೂ ಕೂಡ ಈ ಕ್ಷೇತ್ರಕ್ಕೆ ಸುಸಜ್ಜಿತವಾದ ನೂರು ಬೆಡ್ ಆಸ್ಪತ್ರೆ ಇಲ್ಲದೇ ಇರುವುದು ವಿಷಾದನೀಯ ಸಂಗತಿ.
ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಅತ್ಯಾಧುನಿಕ ಸಲಕರಣೆಗಳು ಹಾಗೂ ಸುಸಜ್ಜಿತ ಸೌಲಭ್ಯಗಳು ಇಲ್ಲದ ಕಾರಣ ತೀವ್ರ ತರಹದ ಅನಾರೋಗ್ಯ, ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ಶೃಂಗೇರಿಯಿಂದ ಸುಮಾರು 100 ಕಿ.ಮೀ ದೂರದ ಊರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಿದೆ. ಬಹುಪಾಲು ಜನರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದರೆ ಉಳಿದವರು ಹಣದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು 100 ಬೆಡ್ ಆಸ್ಪತ್ರೆಯ ಹೋರಾಟ ಸಮಿತಿಯು ಜನರ ಸಂಕಷ್ಟಗಳನ್ನು ವಿಸ್ಕೃತವಾಗಿ ವಿವರಿಸಿದೆ.
ಮೆಡಿಕಲ್ ಮಾಫಿಯಾ?
ಇದರ ಹಿಂದೆ ಮೆಡಿಕಲ್ ಮಾಫಿಯಾ ಒತ್ತಡ ಇರುವ ಬಗ್ಗೆಯೂ ಸಹ ಸಾಕಷ್ಟು ಅನುಮಾನವಿದೆ, ಆ ಕಾರಣಕ್ಕಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬ ಅನುಮಾನವಿದೆ ಮತ್ತು ರಾಜಕೀಯ ಒತ್ತಡ ಕೆಲಸ ಮಾಡುತ್ತಿರುವ ಸಾಧ್ಯತೆಯೂ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಈ ತಿಂಗಳ 20 ನೇ ತಾರೀಖಿನ ಒಳಗೆ ಈ ಕಾರ್ಯಗಳನ್ನು ಪೂರ್ಣಗೊಳಿಸ ದಿದ್ದಲ್ಲಿ ಶೃಂಗೇರಿ ಬಂದ್ ಗೆ ಕರೆ ನೀಡಲಾಗುವುದು ಎಂದು ಹೋರಾಟ ಸಮಿತಿಯು ಈ ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಯಾವುದೇ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಅಕ್ಟೋಬರ್ 22 ನೆಯ ತಾರೀಕು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದೆ ( ಈ ಮಧ್ಯದಲ್ಲಿ ನವರಾತ್ರಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ಧೇಶದಿಂದ) ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯು ತಿಳಿಸಿದೆ.
ಪ್ರಮುಖ ಬೇಡಿಕೆಗಳು:
1. ಕೂಡಲೇ 100 ಬೆಡ್ ಆಸ್ಪತ್ರೆ ಜಾಗ ಮಂಜೂರಾತಿ ಸಮಸ್ಯೆ ಬಗೆಹರಿಸಿ ಆರೋಗ್ಯ ಇಲಾಖೆಗೆ ಜಾಗ ಮಂಜೂರು ಮಾಡುವುದು, ಹಾಗೂ 100 ಬೆಡ್ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡುವುದು.
2. ಪ್ರಸ್ತುತ ಈಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಎಂಡೊಸ್ಕೋಫಿ, ಹಾಗೂ ಸಿ.ಟಿ ಸ್ಕ್ಯಾನ್ ಮೆಷಿನ್ ಸೌಲಭ್ಯ ಒದಗಿಸುವುದು
ರಾಜಕೀಯೇತರ ಹೋರಾಟ :
ಈ ಹೋರಾಟವು ಸಂಪೂರ್ಣ ರಾಜಕೀಯೇತರವಾಗಿದ್ದು, ಊರಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆ ಅನಿವಾರ್ಯತೆ ಇದ್ದು ಇದಕ್ಕಾಗಿ ಸಾರ್ವಜನಿಕರು ಮತ್ತು ವಿವಿಧ ರಾಜಕೀಯ ಪಕ್ಷದಲ್ಲಿರುವ ಸಮಾನ ಮನಸ್ಕರು ಒಟ್ಟಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ಇದಕ್ಕೆ ಸಮಾಜದ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಈ ಬಂದ್ ನ್ನು ಯಶಸ್ವಿಗೊಳಿಸಲು ಕೈಜೋಡಿಸುವ ಮೂಲಕ ಶೃಂಗೇರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ನೂರು ಬೆಡ್ ಆಸ್ಪತ್ರೆ ಸಮಿತಿಯ ಸಂಘಟಕರು ಕೋರಿದ್ದಾರೆ.
ನಾಳೆ ಶೃಂಗೇರಿಯ ಕಡೆ ಪ್ರವಾಸವನ್ನ ಕೈಗೊಳ್ಳುವವರಿಗೆ ಅಡೆತಡೆ ಉಂಟಾಗಲಿದ್ದು ಪ್ರವಾಸಿಗರು ಬದಲಿ ಮಾರ್ಗವನ್ನ ಬಳಸುವುದು ಅಥವಾ ಪ್ರವಾಸವನ್ನ ಮುಂದೂಡೂವುದು ಒಳಿತು….