ಪೊರಕೆ ಹಿಡಿಯುವ ಕೈಯಲ್ಲಿ ಬಾಕ್ಸಿಂಗ್ ಪಂಚ್..! ಉಡುಪಿಯ ರಿಯಲ್ ತೂಫಾನ್ ಯಮನೂರಪ್ಪ,,!
ಪೊರಕೆ ಹಿಡಿದು ಗುಡಿಸುತ್ತಿರುವ ಈ ವ್ಯಕ್ತಿಯ ಹೆಸರು ಯಮನೂರಪ್ಪ.
ಬಾದಾಮಿ ಜಿಲ್ಲೆಯ ವಲಸೆ ಕಾರ್ಮಿಕ. ಓದಿದ್ದು ಬರೀ ಐದನೇ ತರಗತಿ. ಈಗ 26 ವರ್ಷದ ಯುವಕ. ದಿನ ಕೂಲಿ ನೌಕರ. ಸದ್ಯಕ್ಕೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಸಪೋರ್ಟ್ ಸ್ಟಾಫ್..!
ಹೀಗೇ ಗುಡಿಸುತ್ತಿದ್ದ. ನಾವು ಬಂದಿರುವುದನ್ನು ನೋಡಿ ಕತ್ತೆತ್ತಿ, ಬಾಯಗಲಿಸಿ ನಮಸ್ತೆ ಸರ್ ಎಂದವನ ಕಣ್ಣು ಬಾತಿದೆ. ರಕ್ತ ಒಸರಿದೆ. ಆದರೂ ನಗು ಮುಂದುವರೆದಿದೆ. ಇದೇನಾಯ್ತು? ಆಕ್ಸಿಡೆಂಟಾ ? ಅಂತ ಪ್ರಶ್ನೆ ಕೇಳಿದಾಗ ಆತ ನೀಡಿದ ಉತ್ತರ ಕೇಳಿ ಅಚ್ಚರಿಯೂ ಆಯ್ತು.
ಹೌದು, ಆಗಲೇ ಹೊರಬಂದಿದ್ದು ತೂಫಾನಿನಂತಹ ನೈಜ ಕಥೆ. ಯಮನೂರಪ್ಪನ ಜೀವನದ ಯಶೋಗಾಥೆಯನ್ನು ಕೇಳಿದಾಗ ನಮ್ಮಲ್ಲೂ ಎಂಥಹ ಪ್ರತಿಭೆಗಳಿವೆ ಅಂತ ಅನ್ನಿಸಿದ್ದು ಸುಳ್ಳಲ್ಲ.
ಊರಿನಲ್ಲಿ ಕುರಿ ಮೇಯಿಸುತ್ತಿದ್ದ ಹುಡುಗ. ಆರನೇ ಕ್ಲಾಸನ್ನು ಏರಲಾಗಲಿಲ್ಲ. ಕೂಲಿಗಾಗಿ ಮಂಗಳೂರು, ಗೋವಾ, ಕೇರಳಗಳಿಗೆ ವಲಸೆ. ಮರ ಕತ್ತರಿಸೋದರಲ್ಲಿ ಎಕ್ಸ್ಪರ್ಟ್. ರಬ್ಬರ್ ಹಾಲು ಶೇಖರಿಸೋದರಲ್ಲಿ ಬಹಳ ವೇಗ. ಹಿಡಿದ ಕೆಲಸಗಳಲ್ಲೆಲ್ಲಾ ಅಚ್ಚುಕಟ್ಟು. ಹೀಗೆ ಜೀವನ ಸಾಗುತ್ತಿದ್ದಾಗ ಯಮನೂರಪ್ಪನವರಿಗೆ ರೆಸ್ಲಿಂಗ್ ಕ್ರೀಡೆಯ ಮೇಲೆ ಇದ್ದಕ್ಕಿದ್ದ ಹಾಗೇ ಪ್ರೀತಿ ಮೂಡಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ರೆಸ್ಲಿಂಗ್ ಕ್ರೀಡೆಯನ್ನೇ ಸಂಪೂರ್ಣವಾಗಿ ಪರವಶಮಾಡಿಕೊಳ್ಳುವಷ್ಟರ ಮಟ್ಟಿಗೆ.
ಸಮಯ ಸಿಕ್ಕಾಗಲೆಲ್ಲಾ ಯೂಟ್ಯೂಬ್ ತೆರೆದು ರೆಸ್ಲಿಂಗ್ ವೀಕ್ಷಣೆ. ಅದರದೇ ಗುಂಗು. ಭಾರತೀಯ ಮೂಲದ ಗ್ರೇಟ್ ಕಲಿ ಯಮನೂರಪ್ಪನವರಿಗೆ ಆರಾಧ್ಯ ದೈವವಾದ. ದಿನದ ಕೂಲಿಗಾಗಿ ದುಡಿಯುತ್ತಿದ್ದ ಯುವಕನಿಗೆ ತಾನೂ ಫೈಟಿಂಗ್ ಮಾಡಬೇಕು, ಸ್ಪರ್ಧೆ ಮಾಡಬೇಕು ಅನ್ನೋ ಆಸೆ. ರೆಸ್ಲಿಂಗ್ ಪಟುವಾಗಬೇಕು ಅನ್ನೋ ಕನಸು ಕಾಣುತ್ತಿದ್ದ. ಅದಕ್ಕೆ ಸರಿಯಾಗಿಯೇ ಗ್ರೇಟ್ ಕಲಿಯ ಅಕಾಡೆಮಿಯೊಂದು ದೆಹಲಿಯಲ್ಲಿರೋದು ಗೊತ್ತಾಗಿ ರೈಲು ಹತ್ತಿಯೇ ಬಿಟ್ಟ.
ವಸತಿ, ತರಬೇತಿ, ಆಹಾರ. ಎಲ್ಲವೂ ಸೇರಿದರೆ ತಿಂಗಳಿಗೆ ರೂ. 40,000 ಬೇಕಾಗುತ್ತೆ. ಈ ವರೆಗಿನ ಸಂಪಾದನೆಯ ಉಳಿತಾಯ ಮತ್ತು ಸ್ನೇಹಿತರ ಸಹಾಯದಿಂದ ಎರಡು ತಿಂಗಳ ಕಾಲ ದೆಹಲಿಯಲ್ಲಿ ಇರಬಹುದು ಅನ್ನೋ ಲೆಕ್ಕಚಾರ ಹಾಕೊಂಡಿದ್ದ. ಆದ್ರೆ ಮುಂದೇನು ? ಹಾಗಂತ ದೆಹಲಿಯಲ್ಲಿ ಸಹಾಯ, ನೆರವು, ಭರವಸೆ ದೊರೆಯಲಿಲ್ಲ. ನಿರಾಸೆಯಿಂದ ಮತ್ತೆ ಊರ ದಾರಿ ಹಿಡಿದಿದ್ದರು ಯಮನೂರಪ್ಪನವರು.
ಬಳಿಕ ಮತ್ತೆ ಉದ್ಯೋಗ ಅರಸಿ ಉಡುಪಿಗೆ ಬಂದ ಯಮನೂರಪ್ಪನವರು ಎಂ.ಜಿ.ಎಂ ಕಾಲೇಜಿನಲ್ಲಿ ಸಪೋರ್ಟ್ ಸ್ಟಾಫ್..! ಆಗಿ ಕೆಲಸಕ್ಕೆ ಸೇರಿಕೊಂಡ್ರು.
ಮತ್ತೆ ಕನಸು ಗರಿಗೆದರಿತು. ಈ ಬಾರಿ ರೆಸ್ಲಿಂಗಲ್ಲ. ಬದಲಾಗಿ ಬಾಕ್ಸಿಂಗ್.
ಮಣಿಪಾಲದ ಜಿಮ್ ಒಂದರ ಬಾಗಿಲು ತಟ್ಟಿದ ಯಮನೂರಪ್ಪನವರು, ತನಗೆ ಬೇಕಾದಂತಹ ಬಾಕ್ಸಿಂಗ್ ಗುರುವನ್ನು ಹುಡುಕಿದ್ರು. ಆದ್ರೆ ಖರ್ಚು ವೆಚ್ಚ ಜಾಸ್ತಿಯಾಯ್ತು. ಅಷ್ಟೇ ಅಲ್ಲ, ಊರಿನ ಮನೆಯ ಖರ್ಚಿನ ಜವಾಬ್ದಾರಿ ಕೂಡ ಯಮನೂರಪ್ಪನವರ ಹೆಗಲ ಮೇಲಿತ್ತು. ಹೀಗೆ ಬಾಕ್ಸಿಂಗ್ ತರಬೇತಿ ಪಡೆಯುವುದು ಕಷ್ಟ ಅಂತ ಗೊತ್ತಾದಾಗ ಯಮನೂರಪ್ಪನವರು ಹಠವನ್ನು ಮಾತ್ರ ಬಿಡಲಿಲ್ಲ. ಆಗ ಇವರಿಗೆ ಗುರುವಾಗಿ ಸಿಕ್ಕಿದ್ದು ಅಲೆವೂರಿನ ಶಿವಪ್ರಸಾದ್ ಆಚಾರ್ಯ. ತರಬೇತಿ ಶುಲ್ಕವೂ ಕೈಗೆಟುಕುವಂತದ್ದು. ಅಲ್ಲಿಂದ ಶುರುವಾಯ್ತು ಯಮನೂರಪ್ಪನವರ ಬಾಕ್ಸಿಂಗ್ ಪಯಣ. ಉಡುಪಿಯಿಂದ ಬೆಂಗಳೂರಿನ ತನಕ ಬಂದ ಯಮನೂರಪ್ಪನವರು ಸ್ಪರ್ಧೆಯೊಂದರಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡ್ರು.
ಯಮನೂರಪ್ಪ ತನ್ನ ನಿತ್ಯ ಕೆಲಸದೊಂದಿಗೆ ಬೆಳಿಗ್ಗೆ ಅಥವಾ ಸಂಜೆ ತರಬೇತಿಗಾಗಿ ಅಲೆವೂರಿಗೆ ಹೋಗುತ್ತಿದ್ದರು ಲಾಕ್ ಡೌನ್, ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ತರಬೇತಿಗೆ ತೆರಳಲು ಸಾಧ್ಯವಾಗಲಿಲ್ಲ. ಆದ್ರೆ ಆಸಕ್ತಿ ಕುಗ್ಗಲಿಲ್ಲ. ಬಾಕ್ಸಿಂಗ್ ಕಿಟ್ಟು, ಬ್ಯಾಗು ಕೊಂಡುಕೊಳ್ಳುವಷ್ಟು ಹಣವಿಲ್ಲ. ಕೊನೆಗೆ ದೊಡ್ಡ ಟೈರೊಂದನ್ನು ತಂದು, ಅದಕ್ಕೆ ಹಗ್ಗ ಕಟ್ಟಿ ಮರದ ರೆಂಬೆಗೆ ಸಿಕ್ಕಿಸಿ ಪ್ರತಿ ದಿನ ಅಭ್ಯಾಸ ನಡೆಸುತ್ತಿದ್ದಾರೆ.ದಿನದ ಕೆಲಸ ಮುಗಿದದ್ದೇ ತಡ ಯಮನೂರಪ್ಪನವರು ಬಾಕ್ಸಿಂಗ್ ಕಣಕ್ಕೆ ಇಳಿದಾಗುತ್ತೆ. ಏಕಲವ್ಯನಂತೆ ಏಕಾಂಗಿ ಅಭ್ಯಾಸ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಅನ್ನೋ ಕನಸು ಕಾಣುತ್ತಿರುವ ಯಮನೂರಪ್ಪನವರಿಗೆ ಸೂಕ್ತ ತರಬೇತಿ ಬೇಕು. ಸೌಲಭ್ಯಗಳು ಬೇಕು. ಆದ್ರೆ ದಿನಗೂಲಿ ನೌಕರನಾಗಿರುವ ಯಮನೂರಪ್ಪನವರಿಗೆ ಬಾಕ್ಸಿಂಗ್ ಕೌಶಲ್ಯಗಳನ್ನು ಕಲಿಯಲು ಆರ್ಥಿಕ ಸಹಾಯಬೇಕು. ಇಂತಹ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಸಿಕ್ಕಿದ್ರೆ ಯಾರಿಗೊತ್ತು ಮುಂದೊಂದು ದಿನ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧೆ ನಡೆಸಬಹುದು.
ಹೌದು, ಇಂತಹ ಪ್ರತಿಭೆಗೊಂದು ಅವಕಾಶ ಸಿಗಬೇಕಲ್ವೇ? ಕೆಲಸ ಬಿಟ್ಟು ಬಾಕ್ಸಿಂಗನ್ನೇ ದಿನವಿಡೀ ಕಲಿಯುವ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ಸಿಕ್ಕರೆ ನಮ್ಮವನೊಬ್ಬ ಕ್ರೀಡಾ ಸಾಧಕನಾದ ಹೆಮ್ಮೆ ಇರುತ್ತೆ.
ದೆಹಲಿಯಲ್ಲೆಲ್ಲ ಅತ್ಯುತ್ತಮ ಟ್ರೈನಿಂಗ್ ಸೆಂಟರುಗಳಿವೆ. ಸರಿಯಾದ ಮಾರ್ಗದರ್ಶನ, ನೆರವು ಸಿಕ್ಕರೆ ಇಂದು ಪೆÇರಕೆ ಹಿಡಿದಿರುವ ಯಮನೂರಪ್ಪನ ಕೈಗಳು ಬಾಕ್ಸಿಂಗ್ ಗ್ಲೌಸು ಧರಿಸಿ ದೇಶ, ವಿದೇಶಗಳಲ್ಲಿ ಮಿಂಚುವ ದಿನಗಳು ಬರಬಹುದು.
ಯಮನೂರಪ್ಪನವರ ಕನಸಿಗೆ ರೆಕ್ಕೆ ಕಟ್ಟುವವರಿದ್ದರೆ ದಯವಿಟ್ಟು ಮುಂದೆ ಬನ್ನಿ..!
ಮಂಜುನಾಥ್ ಕಾಮತ್
9980665368