“ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ”
ಮುಂಬೈ : ದೇಶ ಕೊರೊನಾ ಸಂಕಷ್ಟದಲ್ಲಿದ್ದು, ತಾರೆಯರು ಜನರ ಸಹಾಯಕ್ಕೆ ಮುಂದಾಗ್ತಿದ್ದಾರೆ. ಇಂತಹವರ ಪೈಕಿ ಮುಂಚೂಣಿಯಲ್ಲಿರುವ ರಿಯಲ್ ಹೀರೋ ಸೋನು ಸೂದ್ ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಬಡ ವಿದ್ಯಾರ್ಥಿಗಳು , ವಲಸೆ / ಕೂಲಿ ಕಾರ್ಮಿಕರು , ಕೊರೊನಾ ಸೋಂಕಿತರಿಗಾಗಿ ತಮ್ಮ ಕೈಲಾದ ಸಹಾಯ ಮಾಡಿಕೊಂಡೇ ಬಂದಿದ್ದಾರೆ.
ಈಗಲೂ ಸಹ ಕೊರೊನಾ ಸೋಂಕಿತರ ನೆರವಿಗಾಗಿ ಸಾಕಷ್ಟು ಸಹಾಯ ಮಾಡ್ತಿದ್ದಾರೆ. ಆಗಾಗ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುವ ಸೋನು ಈಗ ನೇರವಾಗಿ ಸರ್ಕಾರದ ಬಳಿಯೇ ಜನರ ಹಿತಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ‘ಯಾರ ಪೋಷಕರು ಕೊರೊನಾದಿಂದಾಗಿ ನಿಧನ ಹೊಂದಿರುತ್ತಾರೆಯೋ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿ’ ಎಂದು ಸೋನು ಸೂದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸೋನು , ‘ಕೊರೊನಾದಿಂದ ತಮ್ಮ ಪ್ರೀತಿ ಪಾತ್ರರರನ್ನು ಕಳೆದುಕೊಂಡವರ ನೆರವಿಗೆ ನಾವುಗಳು ನಿಲ್ಲಬೇಕಿದೆ. ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ಭವಿಷ್ಯದ ಬಗ್ಗೆ ನಾವು ಚಿಂತಿಸಬೇಕಾಗಿದೆ’ ಎಂದಿದ್ದಾರೆ.
‘ನಾನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಶಿಕ್ಷಣದ ವಿಷಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಮನವಿ ಮಾಡುವುದೆಂದರೆ ಯಾವ ಮಕ್ಕಳು ಈ ಕೊರೊನಾದಿಂದ ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆಯೋ ಅವರಿಗೆ ಉಚಿತ ಶಿಕ್ಷಣ ಸಿಗುವಂತಾಗಬೇಕು’ ಎಂದಿದ್ದಾರೆ.
‘ಸರ್ಕಾರಿ, ಖಾಸಗಿ ಶಾಲೆ ಎಲ್ಲೇ ಓದುತ್ತಿದ್ದರೂ ಸಹ ಆ ಮಕ್ಕಳು ಎಲ್ಲಿಯವರೆಗೆ ಓದುತ್ತಾರೋ ಅಲ್ಲಿಯ ವರೆಗೆ ಅವರಿಗೆ ಸರ್ಕಾರವೇ ಉಚಿತವಾಗಿ ಶಿಕ್ಷಣ ಒದಗಿಸಬೇಕು ಹೀಗೊಂದು ಆದೇಶವನ್ನು ಸರ್ಕಾರ ಹೊರಡಿಸಬೇಕು’ ಎಂದಿದ್ದಾರೆ. ಸೋನು ಸೂದ್ ಸಾಮಾಜಿಕ ಕಳಕಳಿ ಮತ್ತೊಮ್ಮೆ ನೆಟ್ಟಿಗರು ಅಭಿಮಾನಿಗಳ ಮನಸ್ಸು ಮುಟ್ಟಿದೆ.